ಹುಬ್ಬಳ್ಳಿಯಲ್ಲಿ ಮಾಂಜಾ ದಾರ ಮತ್ತೊಂದು ಜೀವ ಬಲಿ ಪಡೆದಿದೆ.
ಹುಬ್ಬಳ್ಳಿ ನಗರದ ಭರತ್ ನಗರ ನಿವಾಸಿ, ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ವಿದ್ಯಾ ಮಂಜುನಾಥ ಗೌಡರ್, 38 ವರ್ಷದ ಮಹಿಳೆ ಮಾಂಜಾ ದಾರಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ.
ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ, ಮನೆಯಿಂದ ಲ್ಯಾಬ್ ಗೆ ಸ್ಕೂಟಿ ಮೇಲೆ ಹೋಗುತ್ತಿದ್ದಾಗ, ಹುಬ್ಬಳ್ಳಿ ನಗರದ ಶಿವಶಂಕರ ಕಾಲೋನಿ ಬಳಿ ಗಾಳಿಪಟ ಹಾರಿಸಲು ಬಳಸುವ ಮಾಂಜಾ ದಾರ ಕುತ್ತಿಗೆಗೆ ಸಿಲುಕಿದೆ. ಮಾಂಜಾ ದಾರ ಸಿಲುಕಿದ ರಭಸಕ್ಕೆ ಸ್ಕೂಟಿಯಿಂದ ಕೆಳಗೆ ಬಿದ್ದ ಮಹಿಳೆಗೆ ತೀವ್ರ ರಕ್ತಸ್ರಾವವಾಗಿದೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಹಿಳೆ ಮೃತಪಟ್ಟಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾಂಜಾ ದಾರ ಬಳಸುತ್ತಿದ್ದವರನ್ನು ಪತ್ತೆ ಮಾಡುತ್ತಿದ್ದೇವೆ, ಯಾವುದೇ ಕಾರಣಕ್ಕೂ ಗಾಳಿಪಟ ಹಾರಿಸಲು ಮಾಂಜಾ ದಾರ ಬಳಸಬಾರದು, ಬಳಸಿದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ, ಮಾರಾಟ ಮಾಡುವವರ ಮೇಲೂ ಕೇಸ್ ದಾಖಲಾಗುತ್ತದೆ ಎಂದು ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿ ಜನತೆ ದಯವಿಟ್ಟು ಮಾಂಜಾ ದಾರ ಬಳಸಬೇಡಿ, ನಿಮ್ಮ ಮಕ್ಕಳಿಗೆ ಗಾಳಿಪಟ ಕೊಡುವಾಗ ಸಾಮಾನ್ಯ ದಾರ ಕೊಡಿ. ಒಂದು ಜೀವ ಹೋಯ್ತು!