ಭಾರತದ ಚೆಸ್ ತಾರೆ ಆರ್. ಪ್ರಜ್ಞಾನಂದ ಐತಿಹಾಸಿಕ ಸಾಧನೆ ಮಾಡಿದ್ದಾರೆ. 20 ವರ್ಷದ ಗ್ರ್ಯಾಂಡ್ ಮಾಸ್ಟರ್ ಅಮೆರಿಕದಲ್ಲಿ ನಡೆದ ಗ್ರ್ಯಾಂಡ್ ಚೆಸ್ ಟೂರ್ ಫೈನಲ್ಸ್ 2026ರ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಇದರೊಂದಿಗೆ, ಅವರು ಗ್ರ್ಯಾಂಡ್ ಚೆಸ್ ಟೂರ್ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂತಿಮ ಪಂದ್ಯದಲ್ಲಿ, ಪ್ರಜ್ಞಾನಂದ ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಫ್ಯಾಬಿಯಾನೊ ಕರುವಾನಾ ಅವರನ್ನು 15-13 ಅಂಕಗಳಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಪ್ರಜ್ಞಾನಂದ ಭಾರಿ ಮೊತ್ತದ ಬಹುಮಾನ ಪಡೆದುಕೊಂಡಿದ್ದಾರೆ.
ಭಾರತದ ಗ್ರ್ಯಾಂಡ್‌ಮಾಸ್ಟರ್ ಫೈನಲ್‌ನ ಮೊದಲ ಕ್ಲಾಸಿಕಲ್ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು ಮತ್ತು ಎರಡನೇ ಗೇಮ್ ಡ್ರಾ ಆಯಿತು. ಆ ನಂತರ ಅವರು 6 ಅಂಕಗಳಿಂದ ಹಿಂದುಳಿದಿದ್ದರು. ಇದರ ಹೊರತಾಗಿಯೂ, ಪ್ರಜ್ಞಾನಂದ ಬಲವಾದ ಪುನರಾಗಮನ ಮಾಡಿ ಎರಡೂ ರಾಪಿಡ್ ಗೇಮ್‌ಗಳನ್ನು ಗೆದ್ದರು.
ಇದು ಅವರಿಗೆ ಫ್ಯಾಬಿಯಾನೊ ಕರುವಾನಾ ವಿರುದ್ಧ ಮುನ್ನಡೆ ನೀಡಿತು. ನಂತರ ಅವರು ಬ್ಲಿಟ್ಜ್ ಹಂತದಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಕೊನೆಯ ಪಂದ್ಯದಲ್ಲಿ ಅವರಿಗೆ ಕೇವಲ ಡ್ರಾ ಸಾಕಾಗಿತ್ತು ಮತ್ತು ಅವರು ತಮ್ಮ ಹಿಡಿತವನ್ನು ಕಾಯ್ದುಕೊಂಡು ಪಂದ್ಯವನ್ನು ಡ್ರಾ ಮಾಡಿಕೊಂಡು ಪ್ರಶಸ್ತಿಯನ್ನು ವಶಪಡಿಸಿಕೊಂಡರು. ಅಸಾಧಾರಣ ಕಮ್‌ಬ್ಯಾಕ್ ಮಾಡಿ ಚಾಂಪಿಯನ್ ಪಟ್ಟ ಅಲಂಕರಿಸಿದ ಪ್ರಜ್ಞಾನಂದ ಅವರಿಗೆ 2 ಲಕ್ಷ ಡಾಲರ್ (ಸುಮಾರು 1.67 ಕೋಟಿ ರೂ.ಗೂ ಹೆಚ್ಚು) ನಗದು ಬಹುಮಾನ ಲಭಿಸಿದೆ.
ಮುನ್ನಡೆ ಕಾಯ್ದುಕೊಳ್ಳಲು 4 ಪಂದ್ಯಗಳ ಬ್ಲಿಟ್ಜ್ ಹಂತ ನಿರ್ಣಾಯಕವಾಗಿತ್ತು. ಮೊದಲ ಬ್ಲಿಟ್ಜ್ ಪಂದ್ಯದಲ್ಲಿ ಪ್ರಜ್ಞಾನಂದ ಗೆಲುವಿನ ಅವಕಾಶ ಹೊಂದಿದ್ದರೂ, ಸಮಯದ ಒತ್ತಡದಲ್ಲಿ ಎಡವಿ ಸಂಕಷ್ಟಕ್ಕೆ ಸಿಲುಕಿದರು. ಆದರೆ ಕರುವಾನಾಗೆ ಗೆಲುವಿನ ನಡೆಗಳನ್ನು ಕಂಡುಕೊಳ್ಳಲು ಸಾಧ್ಯವಾಗದೆ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಅಂತಿಮವಾಗಿ ಬ್ಲಿಟ್ಜ್ ಹಂತದಲ್ಲಿ ಸಮಬಲ ಸಾಧಿಸಿದ ಪ್ರಜ್ಞಾನಂದ ಒಟ್ಟಾರೆ 15-13 ಅಂಕಗಳ ಅಂತರದಿಂದ ರೋಚಕ ಜಯ ದಾಖಲಿಸಿ ಇತಿಹಾಸ ನಿರ್ಮಿಸಿದರು.
ಫೈನಲ್ ಪಂದ್ಯದ ಆರಂಭದಲ್ಲಿ ಕರುವಾನಾ ಅವರದ್ದೇ ಸಂಪೂರ್ಣ ಪ್ರಾಬಲ್ಯವಿತ್ತು. ಮೊದಲ ಕ್ಲಾಸಿಕಲ್ ಗೇಮ್‌ನಲ್ಲಿ ಪ್ರಜ್ಞಾನಂದ 6-0 ಅಂತರದಲ್ಲಿ ಸೋಲನುಭವಿಸಿ ಭಾರೀ ಹಿನ್ನಡೆ ಕಂಡಿದ್ದರು. ನಂತರ ಎರಡನೇ ಕ್ಲಾಸಿಕಲ್ ಗೇಮ್‌ನಲ್ಲಿ 3-3 ಡ್ರಾ ಸಾಧಿಸುವ ಮೂಲಕ ತಿರುಗೇಟು ನೀಡಿದರು. ಈ ಐತಿಹಾಸಿಕ ಗೆಲುವು ಪ್ರಜ್ಞಾನಂದ ಅವರ 2026 ರ ಅತ್ಯುತ್ತಮ ಅಭಿಯಾನದ ಮತ್ತೊಂದು ಪ್ರಮುಖ ಸಾಧನೆಯಾಗಿದೆ.
ನಾರ್ವೆ ಚೆಸ್ ಟೂರ್ನಿ: ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಗೆದ್ದು ಇತಿಹಾಸ ಬರೆದ ಪ್ರಜ್ಞಾನಂದ!
ಗ್ರ್ಯಾಂಡ್ ಚೆಸ್ ಟೂರ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ; ಐತಿಹಾಸಿಕ ಸಾಧನೆ ಮಾಡಿದ ಪ್ರಜ್ಞಾನಂದ!
ಅಂತಿಮ ಪಂದ್ಯದಲ್ಲಿ, ಪ್ರಜ್ಞಾನಂದ ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಫ್ಯಾಬಿಯಾನೊ ಕರುವಾನಾ ಅವರನ್ನು 15-13 ಅಂಕಗಳಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಪ್ರಜ್ಞಾನಂದ ಭಾರಿ ಮೊತ್ತದ ಬಹುಮಾನ ಪಡೆದುಕೊಂಡಿದ್ದಾರೆ.
TAGS:
Praggnanandhaa
ಪ್ರಜ್ಞಾನಂದ
Grand Chess Tour
ಗ್ರ್ಯಾಂಡ್ ಚೆಸ್ ಟೂರ್
E
E Tv News Desk
Senior Staff Journalist and Correspondent at ETV 24X7. Covering breaking global stories, contemporary culture, and modern innovations.