West asia conflict: ಬೆದರಿಕೆಗೆ ಮಣಿಯಲ್ಲ, ದಾಳಿ ನಿಲ್ಲದ ಹೊರತು ಹಾರ್ಮುಜ್ ಜಲಸಂಧಿ ತೆರೆಯಲ್ಲ: ಅಮೆರಿಕಾಕ್ಕೆ Iran ಖಡಕ್ ಸಂದೇಶ..!
ಭಾನುವಾರ ಇರಾನ್‌ನ ಸರ್ಕಾರಿ ಪ್ರಸಾರ ಸಂಸ್ಥೆ ಐಆರ್‌ಐಬಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರೆಜಾಯಿ, ಅಮೆರಿಕ ಇರಾನ್‌ಗೆ ಬೆದರಿಕೆ ಹಾಕದೆ, ದಾಳಿ ನಡೆಸದೆ ಇದ್ದರೆ ಹೋರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡಲು ಇರಾನ್ ಬದ್ಧವಾಗಿರುತ್ತದೆ ಎಂದು ಹೇಳಿದ್ದಾರೆ.
ಟೆಹ್ರಾನ್: ಜಾಗತಿಕ ತೈಲ ಮಾರುಕಟ್ಟೆಯ ಪ್ರಮುಖ ಜಲಮಾರ್ಗವಾಗಿರುವ ಹeರ್ಮುಜ್ ಜಲಸಂಧಿಯಲ್ಲಿ (Strait of Hormuz) ಯುದ್ಧದ ಭೀತಿ ಮತ್ತಷ್ಟು ತೀವ್ರಗೊಂಡಿದೆ.
ಅಮೆರಿಕ ತನ್ನ ಮಿಲಿಟರಿ ದಾಳಿ ಮತ್ತು ಬೆದರಿಕೆಗಳನ್ನು ತಕ್ಷಣವೇ ನಿಲ್ಲಿಸದಿದ್ದರೆ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುವುದಾಗಿ ಇರಾನ್ ಎಚ್ಚರಿಸಿದೆ. ಇದರ ಬೆನ್ನಲ್ಲೇ ಆಯಕಟ್ಟಿನ ಈ ಭಾಗದಲ್ಲಿ ಇರಾನ್ ಹೊಸದಾಗಿ 'ನಿರ್ಬಂಧಿತ ಕಡಲ ವಲಯ' (Restricted Maritime Zone) ಸ್ಥಾಪಿಸಲು ನಿರ್ಧರಿಸಿದೆ.
ಈ ಪ್ರದೇಶಕ್ಕೆ 'ಟೆಹ್ರಾನ್‌ನೊಂದಿಗೆ ಸಮನ್ವಯ ಮಾಡಿಕೊಳ್ಳದೆ ಪ್ರವೇಶಿಸುವ ಹಡಗುಗಳ ವಿರುದ್ಧ ನಿರ್ಬಂಧ ವಿಧಿಸಲಾಗುವುದು ಎಂದು ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಕಾರ್ಯದರ್ಶಿ ಮೊಹ್ಸೆನ್ ರೆಜಾಯಿ ಎಚ್ಚರಿಸಿದ್ದಾರೆ.
ಇದೇ ವೇಳೆ, ಅಮೆರಿಕವು ಇರಾನ್ ವಿರುದ್ಧ ಬೆದರಿಕೆ ಹಾಗೂ ದಾಳಿಗಳನ್ನು ನಿಲ್ಲಿಸಿದರೆ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡಲು ಇರಾನ್ ಬದ್ಧವಾಗಲಿದೆ ಎಂದು ಹೇಳಿದ್ದಾರೆ.
ಭಾನುವಾರ ಇರಾನ್‌ನ ಸರ್ಕಾರಿ ಪ್ರಸಾರ ಸಂಸ್ಥೆ ಐಆರ್‌ಐಬಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರೆಜಾಯಿ, ಅಮೆರಿಕ ಇರಾನ್‌ಗೆ ಬೆದರಿಕೆ ಹಾಕದೆ, ದಾಳಿ ನಡೆಸದೆ ಇದ್ದರೆ ಹೋರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡಲು ಇರಾನ್ ಬದ್ಧವಾಗಿರುತ್ತದೆ ಎಂದು ಹೇಳಿದ್ದಾರೆ.
ಜೂನ್‌ನಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಸಹಿ ಮಾಡಲಾಗಿದೆ ಎನ್ನಲಾದ ಶಾಂತಿ ತಿಳಿವಳಿಕೆ ಒಪ್ಪಂದದಡಿ ವಾಷಿಂಗ್ಟನ್ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳುವವರೆಗೆ ಜಲಮಾರ್ಗದ ಮೇಲಿನ ನಿರ್ಬಂಧ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
Hormuz ಜಲಸಂಧಿಯಲ್ಲಿ ಮಹಾ ಸಂಘರ್ಷ: Iran 3 ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕಾ ದಾಳಿ; 'ಕಠಿಣ ಪ್ರತೀಕಾರ'ದ ಶಪಥ ಮಾಡಿದ ಟೆಹ್ರಾನ್!
ಹಾರ್ಮುಜ್ ಬಳಿ ಹೊಸ ನಿರ್ಬಂಧಿತ ವಲಯ
ಅಮೆರಿಕದ ನೌಕಾ ದಿಗ್ಬಂಧನ ಆರಂಭವಾಗುವ ಪ್ರದೇಶದಿಂದ ಹೋರ್ಮುಜ್ ಜಲಸಂಧಿಯತ್ತ ಹಾಗೂ ಪರ್ಷಿಯನ್ ಕೊಲ್ಲಿಯ ಕೆಲವು ಭಾಗಗಳನ್ನು ಒಳಗೊಂಡಂತೆ ಹೊಸ ನಿರ್ಬಂಧಿತ ವಲಯ ರೂಪಿಸಲಾಗುವುದು ಎಂದು ರೆಜಾಯಿ ಹೇಳಿದ್ದಾರೆ.
ಈ ಹೊಸ ಪ್ರದೇಶಕ್ಕೆ ಪ್ರವೇಶಿಸುವ ಯಾವುದೇ ಹಡಗನ್ನು ಇರಾನ್‌ನ ನಿರ್ಬಂಧಗಳ ಪಟ್ಟಿಗೆ ಸೇರಿಸಲಾಗುವುದು. ಇದರಿಂದ ಹಡಗುಗಳ ವಿಮಾ ಸೌಲಭ್ಯ ಹಾಗೂ ಭವಿಷ್ಯದಲ್ಲಿ ಜಲಮಾರ್ಗ ಬಳಸುವ ಸಾಮರ್ಥ್ಯದ ಮೇಲೂ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ.
ವಾಣಿಜ್ಯ ಹಡಗುಗಳು ಹಾಗೂ ತೈಲ ಟ್ಯಾಂಕರ್‌ಗಳು ಹಾರ್ಮುಜ್ ಮೂಲಕ ನಿರಂತರವಾಗಿ ಸಂಚರಿಸುತ್ತಿವೆ ಎಂಬ ಅಮೆರಿಕದ ಹೇಳಿಕೆಯನ್ನು ರೆಜಾಯಿ ತಳ್ಳಿಹಾಕಿದ್ದಾರೆ. ಇದನ್ನು ಅವರು “ಸುಳ್ಳು” ಎಂದು ಬಣ್ಣಿಸಿದ್ದಾರೆ.
ಒಮಾನ್ ಸಮೀಪದ ಮಾರ್ಗಗಳಲ್ಲಿ ಸಾಗಲು ಪ್ರಯತ್ನಿಸುವ ಕೆಲವು ಹಡಗುಗಳು ಪತ್ತೆಯಾಗದಂತೆ ತಮ್ಮ ನ್ಯಾವಿಗೇಷನ್ ವ್ಯವಸ್ಥೆಗಳನ್ನು ಸ್ಥಗಿತಗೊಳಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಆದರೆ, ಸದ್ಯಕ್ಕೆ ಅಂತಹ ಹಡಗುಗಳನ್ನು ಮುಳುಗಿಸುವ ಉದ್ದೇಶ ಇರಾನ್‌ಗೆ ಇಲ್ಲ. ಪರ್ಷಿಯನ್ ಕೊಲ್ಲಿ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ಸಂಭವಿಸಬಹುದಾದ ಪರಿಸರ ಹಾನಿಯ ಬಗ್ಗೆ ಇರಾನ್ ಕಳವಳ ಹೊಂದಿದೆ ಎಂದು ತಿಳಿಸಿದ್ದಾರೆ.
ಇರಾನ್-ಒಮಾನ್ ನಡುವೆ ಹೊಸ ಅಂತಾರಾಷ್ಟ್ರೀಯ ಮಾರ್ಗ?
ಇರಾನ್ ಮತ್ತು ಒಮಾನ್ ಸೇರಿಕೊಂಡು ಹಾರ್ಮುಜ್ ಜಲಸಂಧಿಯ ಮೂಲಕ ಹೊಸ ಅಂತಾರಾಷ್ಟ್ರೀಯ ಸಾಗಣೆ ಮಾರ್ಗವನ್ನು ಸ್ಥಾಪಿಸಲು ಸಿದ್ಧತೆ ನಡೆಸುತ್ತಿವೆ ಎಂದು ಹೇಳಿದ್ದಾರೆ.
ಈ ಮಾರ್ಗದ ಪ್ರವೇಶ ಹಾಗೂ ನಿರ್ಗಮನ ಬಿಂದುಗಳನ್ನು ಎರಡೂ ದೇಶಗಳ ನಡುವಿನ ಒಪ್ಪಂದದ ಮೂಲಕ ನಿರ್ಧರಿಸಲಾಗುವುದು. ಮಾರ್ಗದ ನಿರ್ವಹಣೆ ಇರಾನ್‌ನ ನಿಯಂತ್ರಣದಲ್ಲಿರಲಿದೆ ಎಂದು ತಿಳಿಸಿದ್ದಾರೆ.
ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿಲ್ಲ ಎಂದ ಇರಾನ್
ಇರಾನ್ ಕೆಲವು ಅಮೆರಿಕದ ಸೇನಾ ಗುರಿಗಳನ್ನು ಗುರುತಿಸಿದ್ದರೂ, ಉದ್ದೇಶಪೂರ್ವಕವಾಗಿ ಅವುಗಳ ಮೇಲೆ ದಾಳಿ ನಡೆಸಿಲ್ಲ ಎಂದು ರೆಜಾಯಿ ಹೇಳಿದ್ದಾರೆ.
ಜೋರ್ಡನ್‌ನಲ್ಲಿರುವ ಟೈಟನ್ ನೆಲೆ ಹಾಗೂ ಇರಾಕ್‌ನ ಎರ್ಬಿಲ್‌ನಲ್ಲಿರುವ ಕೆಲವು ಅಮೆರಿಕದ ನೆಲೆಗಳನ್ನು ಇರಾನ್ ಗುರಿಗಳಾಗಿ ಗುರುತಿಸಿತ್ತು. ಆದರೆ ಅವುಗಳ ಮೇಲೆ ದಾಳಿ ನಡೆಸದಿರಲು ನಿರ್ಧರಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಅಮೆರಿಕದ ವಿಮಾನವಾಹಕ ನೌಕೆಯ ಬಳಿ ಕ್ಷಿಪಣಿ ಪರೀಕ್ಷೆ?
ಇರಾನ್ ಸ್ವದೇಶಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿದ ಹಡಗು ವಿರೋಧಿ ಶಸ್ತ್ರವೊಂದನ್ನು ಅಮೆರಿಕದ ವಿಮಾನವಾಹಕ ನೌಕೆಯ ಸಮೀಪ ಪರೀಕ್ಷಿಸಿದೆ ಎಂದು ರೆಜಾಯಿ ಹೇಳಿಕೊಂಡಿದ್ದಾರೆ.
ಈ ಪರೀಕ್ಷೆಯು ಅಮೆರಿಕದ ನೌಕಾ ದಿಗ್ಬಂಧನದ ದುರ್ಬಲತೆಯನ್ನು ಎಚ್ಚರಿಸುವ ಸಂದೇಶವಾಗಿತ್ತು ಎಂದು ಅವರು ಹೇಳಿದ್ದಾರೆ.
ಅಮೆರಿಕದ ಹಡಗುಗಳನ್ನು ಗುರಿಯಾಗಿಸುವ ಸಾಮರ್ಥ್ಯ ಇರಾನ್‌ಗೆ ಇದೆ. ಆದರೆ, ಪರ್ಷಿಯನ್ ಕೊಲ್ಲಿಯಲ್ಲಿ ವ್ಯಾಪಕ ಪರಿಸರ ಹಾನಿಗೆ ಕಾರಣವಾಗಬಹುದಾದ ಕ್ರಮಗಳನ್ನು ತಪ್ಪಿಸಲು ಇರಾನ್ ಬಯಸುತ್ತಿದೆ ಎಂದು ಹೇಳಿದ್ದಾರೆ.
ನೇಪಾಳದಲ್ಲಿ ಮತ್ತೆ ಪ್ರವಾಹ ಆತಂಕ; ಬುಧಿಗಂಡಕಿ ನದಿ ತೀರದಲ್ಲಿ ಹೈ ಅಲರ್ಟ್, ಆಗಿದ್ದೇನು?
ಹಾರ್ಮುಜ್ ಮೂಲಕ ಹಡಗು ಸಂಚಾರ ಭಾರಿ ಕುಸಿತ
ಈ ನಡುವೆ ಹಾರ್ಮುಜ್ ಜಲಸಂಧಿ ಮೂಲಕ ವಾಣಿಜ್ಯ ಹಡಗುಗಳ ಸಂಚಾರ ತೀವ್ರವಾಗಿ ಕುಸಿದಿದೆ. ಕೆಪ್ಲರ್ ಅಂಕಿಅಂಶಗಳನ್ನು ಉಲ್ಲೇಖಿಸಿರುವ ರಾಯಿಟರ್ಸ್ ವರದಿ ಪ್ರಕಾರ, ಕಳೆದ 10 ದಿನಗಳಲ್ಲಿ ದಿನಕ್ಕೆ ಸರಾಸರಿ ಕೇವಲ 10 ಸರಕು ಸಾಗಣೆ ಹಡಗುಗಳು ಜಲಸಂಧಿಯನ್ನು ದಾಟಿವೆ.
ಶನಿವಾರ ಕೇವಲ ಎರಡು ಹಡಗುಗಳು ಹೋರ್ಮುಜ್ ದಾಟಿದ್ದರೆ, ಭಾನುವಾರ ಆರು ಹಡಗುಗಳು ಸಂಚರಿಸಿವೆ. ಇವುಗಳಲ್ಲಿ ಹೆಚ್ಚಿನವು ಇರಾನ್ ಮಾರ್ಗವನ್ನು ಬಳಸಿವೆ.
ಭಾನುವಾರ ಒಂದು ಅತಿ ದೊಡ್ಡ ಕಚ್ಚಾ ತೈಲ ಸಾಗಣೆ ಹಡಗು ಹಾಗೂ ಮೂರು ಬೃಹತ್ ಸರಕು ಸಾಗಣೆ ಹಡಗುಗಳು ಜಲಸಂಧಿಯನ್ನು ಪ್ರವೇಶಿಸಿವೆ. ಆದರೆ ಬುಧವಾರದಿಂದ ಯಾವುದೇ ಅತಿ ದೊಡ್ಡ ಕಚ್ಚಾ ತೈಲ ಸಾಗಣೆ ಹಡಗು ಜಲಸಂಧಿಯಿಂದ ಹೊರಬಂದಿಲ್ಲ ಎಂದು ಕೆಪ್ಲರ್ ಮಾಹಿತಿ ತಿಳಿಸಿದೆ.
ಇದೇ ವೇಳೆ, ಸೌದಿ ಬಂದರಿನಿಂದ ಸಂಸ್ಕರಿತ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಟ್ಯಾಂಕರ್‌ವೊಂದು ಭಾನುವಾರ ಹೋರ್ಮುಜ್ ಮೂಲಕ ಗಲ್ಫ್‌ನಿಂದ ಹೊರಬರಲು ಪ್ರಯತ್ನಿಸಿ ಬಳಿಕ ಮತ್ತೆ ಹಿಂದಿರುಗಿದೆ ಎಂದು ಎಲ್‌ಎಸ್‌ಇಜಿ ಮಾಹಿತಿಯನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಜುಲೈ 6ರಿಂದ ಈ ಪ್ರದೇಶದಲ್ಲಿ ಹಡಗುಗಳಿಗೆ ಹಾನಿ ಉಂಟುಮಾಡಿದ 27 ಕ್ಷಿಪಣಿ ಅಥವಾ ಪ್ರಕ್ಷೇಪಕ ದಾಳಿ ಘಟನೆಗಳನ್ನು ಬ್ರಿಟನ್‌ನ ಮೆರಿಟೈಮ್ ಟ್ರೇಡ್ ಆಪರೇಷನ್ಸ್ ಏಜೆನ್ಸಿ ದಾಖಲಿಸಿದೆ. ಈ ಬೆಳವಣಿಗೆಗಳ ನಡುವೆ ಹೋರ್ಮುಜ್ ಜಲಸಂಧಿಯಲ್ಲಿನ ಹಡಗು ಸಂಚಾರ ಮತ್ತಷ್ಟು ಕುಸಿದಿರುವುದು ಜಾಗತಿಕ ಇಂಧನ ಸಾಗಣೆಯ ಮೇಲೂ ಆತಂಕ ಹೆಚ್ಚಿಸಿದೆ.
TAGS:
US
ಅಮೆರಿಕಾ
Iran
ಇರಾನ್
ಮಧ್ಯಪ್ರಾಚ್ಯ ಸಂಘರ್ಷ
West Asia conflict
Hormuz
ಹಾರ್ಮುಜ್
E
E Tv News Desk
Senior Staff Journalist and Correspondent at ETV 24X7. Covering breaking global stories, contemporary culture, and modern innovations.